ಡಾಂಗ್ಸ್ -
ಗುಜರಾತ್ ರಾಜ್ಯದ ದಕ್ಷಿಣ ತುದಿಯಲ್ಲಿರುವ ಗುಡ್ಡಗಾಡು ಜಿಲ್ಲೆ. ಇದರ ದಕ್ಷಿಣ ಮತ್ತು ಪೂರ್ವಕ್ಕೆ ಮಹಾರಾಷ್ಟ್ರ, ಪಶ್ಚಿಮಕ್ಕೆ ಬಲ್‍ಸಾರ್ ಜಿಲ್ಲೆ. ಉತ್ತರಕ್ಕೆ ಸೂರತ್ ಜಿಲ್ಲೆ ಹೊಂದಿಕೊಂಡಿವೆ. ವಿಸ್ತೀರ್ಣ 1,683 ಚ.ಕಿಮೀ. ಜನಸಂಖ್ಯೆ 94, 185 (1971). ಈ ಜಿಲ್ಲೆಯಲ್ಲಿ ಒಂದೇ ಒಂದು ತಾಲ್ಲೂಕಿದೆ. ಜಿಲ್ಲೆಯ ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಆಹ್ವಾ.

ಮೊದಲು ಈ ತಾಲ್ಲೂಕು ಐವರು ರಾಜರ ಮತ್ತು ಒಂಬತ್ತು ನಾಯಕರ ಪುಟ್ಟ ಪಾಳೆಯಪಟ್ಟುಗಳಿಂದ ಕೂಡಿತ್ತು. 1947ರಲ್ಲಿ ಈ ಪ್ರದೇಶ ಮುಂಬಯಿ ಪ್ರಾಂತ್ಯಕ್ಕೆ ಸೇರಿಸಲ್ಪಟ್ಟಿತು. 1960ರಲ್ಲಿ ಇದು ಗುಜರಾಜ್ ರಾಜ್ಯಕ್ಕೆ ವರ್ಗಾಯಿಸಲ್ಪಟ್ಟು ಸೂರತ್ ಜಿಲ್ಲಾ ಕಲೆಕ್ಟರರ ಆಡಳಿತದಲ್ಲಿ ಬಂದ ಅನಂತರ ಇಲ್ಲಿಯ ಹಿಂದುಳಿದ ಜನರ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಪ್ರತ್ಯೇಕ ಜಿಲ್ಲೆಯನ್ನೇ ರೂಪಿಸಲಾಯಿತು. ಜನಸಂಖ್ಯೆ 1951ರಲ್ಲಿ 47,282ರಷ್ಟಿತ್ತು. 1971ರ ಜನಸಂಖ್ಯೆಯಾದ 94,185ರಲ್ಲಿ 88,028 ಜನ ಆದಿವಾಸಿಗಳು.

ಪಶ್ಚಿಮ ಘಟ್ಟಗಳ ಪುಟ್ಟ ಪಡಸಾಲೆಯಂತಿರುವ ಡಾಂಗ್ಸ್ ಜಿಲ್ಲೆ ಸಮುದ್ರ ಪಾತಳಿಯಿಂದ 1,500'-2,000' ಎತ್ತರವಾಗಿದೆ. ಈ ಜಿಲ್ಲೆಯಲ್ಲಿ ವರ್ಷಕ್ಕೆ 125'-250' ಮಳೆಯಾಗುತ್ತದೆ. ಜೂನ್‍ನಿಂದ ಅಕ್ಟೋಬರ್ ವರೆಗೆ ಮಳೆ. ವರ್ಷದ ಗರಿಷ್ಠ ಉಷ್ಣತೆ ಮೇ ತಿಂಗಳಲ್ಲಿ 380 ಅ. ಕನಿಷ್ಠ ಉಸ್ಣತೆ ಜನವರಿ ತಿಂಗಳಲ್ಲಿ 150 ಅ. ಜಿಲ್ಲೆಯ ನದಿಗಳು ಅಂಬಿಕಾ ಮತ್ತು ಪೂರ್ಣಾ. ಇವು ಸೂರತ್ ಜಿಲ್ಲೆಯ ಮೂಲಕ ಹರಿದು ಅರಬೀ ಸಮುದ್ರ ಸೇರುತ್ತವೆ.

ಜಿಲ್ಲೆಯ ಒಟ್ಟು 4,22,104 ಎಕರೆ ನೆಲದಲ್ಲಿ 2,45,336 ಎಕರೆಗಳಷ್ಟು ಅರಣ್ಯ ಪ್ರದೇಶವೇ ಇದೆ. ಇಲ್ಲಿಯ ಅರಣ್ಯ ಪ್ರದೇಶದ ಹುಟ್ಟುವಳಿಯ 45% ಭಾಗ ತೇಗದಿಂದ ಬರುತ್ತದೆ. ಭಾರತದ ಅತ್ಯುತ್ತಮ ತೇಗ ಇದೆಂದು ಹೆಸರಾಗಿದೆ. ಇತರ ಮರಗಳು ಬಿದಿರು, ಬಿಂಡಿ, ಹಲಸು, ಮುಂತಾದವು. ಹುಲಿ, ಕರಡಿ, ಚಿಗರೆ ಮುಂತಾದ ಪ್ರಾಣಿಗಳು ಇಲ್ಲಿಯ ಅರಣ್ಯಗಳಲ್ಲಿ ವಾಸಿಸುತ್ತವೆ.

ಈ ಜಿಲ್ಲೆಯಿಡೀ ಗ್ರಾಮಾಂತರ ಪ್ರದೇಶವೆಂದೇ ಪರಿಗಣಿತವಾಗಿದೆ. ಜಿಲ್ಲಾ ಕೇಂದ್ರವೆನಿಸಿದ ಆಹ್ವಾ ಕೂಡ 5,422 ಜನಸಂಖ್ಯೆಯನ್ನುಳ್ಳ ಗ್ರಾಮ. ಈ ಜಿಲ್ಲೆಯಲ್ಲಿ ಒಟ್ಟು 211 ಹಳ್ಳಿಗಳಿವೆ. 278 ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆಗಳೂ ಎರಡು ಗ್ರಾಮಗಳಲ್ಲಿ ಮಾಧ್ಯಮಿಕ ಶಾಲೆಗಳೂ ಇವೆ. ಆಸ್ಪತ್ರೆಗಳಿರುವ ಹಳ್ಳಿಗಳು 5. ಪ್ರಾಥಮಿಕ ಆರೋಗ್ಯ ಕೇಂದ್ರಗಳು 9 ಹಳ್ಳಿಗಳಲ್ಲಿವೆ. 8 ಹಳ್ಳಿಗಳಲ್ಲಿ ಪರಿವಾರ ನಿಯೋಜನ ಕೇಂದ್ರಗಳಿವೆ. ಕೇವಲ 13 ಹಳ್ಳಿಗಳಿಗೆ ವಿದ್ಯುದ್ದೀಪದ ಸೌಕರ್ಯವುಂಟು. 84 ಹಳ್ಳಿಗಳಿಗೆ ಪಕ್ಕಾ ರಸ್ತೆಯ ಸೌಲಭ್ಯವಿದೆ. ಅವುಗಳಲ್ಲಿಯ 43 ಹಳ್ಳಿಗಳಿಗೆ ಮಾತ್ರ ಬಸ್ಸು ಸೌಕರ್ಯವಿದೆ. ಕುಡಿಯುವ ನೀರಿನ ಬಾವಿಗಳಿರುವುದು 28 ಹಳ್ಳಿಗಳಲ್ಲಿ. ಎರಡು ಗ್ರಾಮಗಳಲ್ಲಿ ಮಾತ್ರ ನಲ್ಲಿಯ ಸೌಕರ್ಯ ಇದೆ.

ಜಿಲ್ಲೆಯಲ್ಲಿ 34,066 ಎಕರೆ ಭೂಮಿ ಮಾತ್ರ ವ್ಯವಸಾಯಯೋಗ್ಯ. 9,932 ಎಕರೆ ಸಾಗುವಳಿಯಾಗದೆ ಪಡ ಬಿದ್ದಿದೆ. ಭೂಮಿ ಸಾಮಾನ್ಯವಾಗಿ ಕಲ್ಲಿನಿಂದ ಕೂಡಿದ್ದು. ಬೆಟ್ಟಗಳ ಇಳಿಜಾರು ಭಾಗಗಳಲ್ಲಿ ಕೆಮ್ಮಣ್ಣೂ ಜಿಲ್ಲೆಯ ಪಶ್ಚಿಮ ಭಾಗದ ಎತ್ತರ ಪ್ರದೇಶದಲ್ಲಿ ಕರಿಯ ಮಣ್ಣೂ ಇವೆ. ಭೂಮಿ ಹೆಚ್ಚು ಫಲವತ್ತಾಗಿಲ್ಲ. ಗುಡ್ಡ-ಬೆಟ್ಟಗಳ ಇಳಿಜಾರುಗಳಲ್ಲಿ ಭೂಮಿ ವಿಶೇಷವಾಗಿ ಸವೆತಕ್ಕೆ ಒಳಗಾಗಿದೆ. ಗೋದಿ ಮತ್ತು ಗೋವಿನ ಜೋಳ ಇಲ್ಲಿಯ ಜನರ ಮುಖ್ಯ ಆಹಾರ ಬೆಳೆ. ತೇಗಿನ ಮರಗಳ ಅಧಿಕೃತ ಕಡಿತ ಮತ್ತು ಉರವಲು ಕಟ್ಟಿಗೆಯ ಸಂಗ್ರಹ-ಸಾಗಣೆಗಳಲ್ಲಿ ಇಲ್ಲಿಯ ಜನ ಹೆಚ್ಚಾಗಿ ನಿರತರಾಗಿರುತ್ತಾರೆ.

ಜಿಲ್ಲೆಯಲ್ಲಿರುವ ಆದಿವಾಸಿಗಳಲ್ಲಿ ಭಿಲ್ ಮತ್ತು ಕುಣಬೇ ವರ್ಗಗಳು ಮುಖ್ಯ. ಇವರ ಊಟ-ಉಪಚಾರ, ಉಡುಗೆ-ತೊಡುಗೆ, ಹಬ್ಬ-ಹುಣ್ಣಿಮೆಗಳ ವೈಶಿಷ್ಟ್ಯಗಳನ್ನಿಂದಿಗೂ ಕಾಣಬಹುದು. ಬ್ರಿಟಿಷರ ಕಾಲದಿಂದಲೂ ಆಹ್ವಾದಲ್ಲಿ ನಡೆದು ಬಂದ ಡಾಂಗ್ಸ್ ದರ್ಬಾರ್ ಉತ್ಸವ ಈಗಲೂ ಹೋಳೀ ಹುಣ್ಣಿಮೆಯ ಸಂದರ್ಭದಲ್ಲಿ ಬಲು ಸಡಗರದಿಂದ ನಡೆಯುತ್ತದೆ. ಮೊದಲು ಡಾಂಗ್ ದೊರೆಗಳು ಈ ದರ್ಬಾರ್ ನಡೆಸುತ್ತಿದ್ದರು. ಈಗ ಇದನ್ನು ಪಟೇಲರು ನಡೆಸುತ್ತಾರೆ. ಈ ಉತ್ಸವವನ್ನು ನೋಡಲು 20-25 ಸಾವಿರ ಜನ ಸೇರುತ್ತಾರೆ. ಜಿಲ್ಲೆಯಲ್ಲಿ ಆಹ್ವಾ, ವಾಘಾಯಿ, ಪಿಪ್ಲಾಯಿದೇವಿ, ಬರ್ಡಿಪಡು, ಗಾಲಕುಂದ, ಚಿಂಚಲಿ, ಕಲಿಬೆಲ್, ಮಹಾಲ್, ಡಾನ್, ಗಾಢವಿ, ಪಿಂಪರಿ ಮುಂತಾದ ಗ್ರಾಮಗಳು ಹೆಚ್ಚು ಮುಂದುವರಿದಿವೆ.

ರೈಲು ಮತ್ತು ಮೋಟಾರು ರಸ್ತೆಗಳ ಸೌಲಭ್ಯ ಇರುವ ವಾಘಾಯಿ ಗ್ರಾಮ ಡಾಂಗ್ಸ್ ಜಿಲ್ಲೆಯ ಪ್ರವೇಶದ್ವಾರವೆಂದು ಹೆಸರಾಗಿದೆ; ವ್ಯಾಪಾರೋದ್ಯಮಗಳಿಂದಲೂ ವಿವಿಧ ಶೈಕ್ಷಣಿಕ ಸೌಕರ್ಯಗಳಿಂದಲೂ ಕೂಡಿದೆ. ಇಲ್ಲಿ ನಡೆಯುವ ಬಾದಶಾಹ ಬಾವಾ ಪೀರ್ ಮತ್ತು ಜರೀವಾಲಾ ಪೀರ್ ಉರುಸು ಬಲು ಪ್ರಸಿದ್ದ. ಆಹ್ವಾದಿಂದ 44 ಕಿಮೀ. ದೂರದಲ್ಲಿ ಸಮುದ್ರಮಟ್ಟದಿಂದ 3,200' ಎತ್ತರದಲ್ಲಿರುವ ಸಾಪುತಾರಾ ಗುಜರಾತಿನ ಏಕೈಕ ಗಿರಿಧಾಮವಾಗಿ ಅಭಿವೃದ್ಧಿ ಹೊಂದುತ್ತಿದೆ.
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ